Wednesday, February 22, 2012

ವಿಷಯ - 03

ಕೆಲವು ದಶಕಗಳ ಹಿಂದೆ ಹಾಗೂ ಶತಮಾನಗಳ ಹಿಂದೆ ವಾಸಿಸುತ್ತಿದ್ದ ಜನರಲ್ಲಿ ಮೂಢನಂಬಿಕೆ ಮನೆ ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಆ ಜನರಲ್ಲಿ ಮೂಡನಂಭಿಕೆಯನ್ನು ಹೋಗಲಾಡಿಸಲು ರಾಜಾರಾಂ ಮೋಹನ್ ರಾಯ್, ಭಕ್ತಿ ಭಂಡಾರಿ ಬಸವಣ್ಣ, ಸ್ವಾಮಿ ವಿವೇಕಾನಂದರು ಸೇರಿದಂತೆ ಹಲವೂ ಮಹನೀಯರು ತುಂಬಾ ಶ್ರಮಿಸಿರುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ.

ಈಗ ನಾವೆಲ್ಲರೂ "ಮಾಹಿತಿ ತಂತ್ರಜ್ಞಾನ ಯುಗ" ಎಂದೇ ಕರೆಯಲಾಗುವ ಈ ಕಾಲದಲ್ಲಿ ಬುದ್ದಿಜೀವಿಗಳಾಗಿ (ಅತಿ ಬುದ್ದಿವಂತರಾಗಿ) ಇದ್ದೇವೆ ನಾವು ತಿಳಿದುಕೊಂಡಿದ್ದೇವೆ. ವಿಜ್ಞಾನವು ಇಷ್ಟೆಲ್ಲಾ ಮುಂದುವರೆದರೂ, ನಾವು ಜ್ಞಾನಿಗಳಾಗಿದ್ದರೂ ಇನ್ನೂ ಮೌಢ್ಯತೆಯ ನೆರಳಲ್ಲಿ ಇರುವುದು ನೆನೆದರೆ ಭಯವೆನಿಸುತ್ತದೆ. ಇತ್ತೀಚಿನ ದಿನಗಳವರೆಗೂ ಬಾಲ್ಯವಿವಾಹಗಳು ನಿಂತಿಲ್ಲ, ಮಾಟ-ಮಂತ್ರಗಳು ನಿಂತಿಲ್ಲ (ಚುನಾವಣೆಗಾಗಿ ವಿಶೇಷ ಮಾಟ-ಮಂತ್ರಗಳು), ಮಡೆಸ್ನಾನಗಳು ನಿಂತಿಲ್ಲ ಅಲ್ಲದೇ ಇನ್ನೂ ಅನೇಕ ಮೌಡ್ಯತೆಗಳು ನಿಲ್ಲದೇ ಸಾಗುತ್ತಿವೆ. ವಿಪರ್ಯಾಸವೆಂದರೆ ಈ ಮೌಡ್ಯತೆಯ ಹಾದಿ ತುಳಿಯುತ್ತಿರುವವರು ಬುದ್ದಿಜೀವಿಗಳೇ, ಇದರಿಂದಾಗುವ ಲೋಪಗಳನ್ನು ಅರಿತವರೇ..?

ಇಂತಹ ಕಾಲದಲ್ಲೂ ಈ ಮೌಡ್ಯತೆಯ ಭಯಾನಕತೆಯ ಬಗ್ಗೆ, ಇನ್ನೂ ಮೌಢ ಆಚರಣೆಯ ನಡೆಯುತ್ತಿವೆಯೇ ಎನ್ನುವುದರ ಬಗ್ಗೆ ನೀವೇನು ಹೇಳಲಿಚ್ಚಿಸುವಿರಿ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....

Tuesday, February 7, 2012

ವಿಷಯ - 02

"ಸರ್ಕಾರದ ಕೆಲಸ ದೇವರ ಕೆಲಸ" ಎಂದು ವಿಧಾನಸೌಧದ ಮುಂದೆ ದೊಡ್ಡದಾಗಿ ಕಾಣುತ್ತದೆ. ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗಲಿ, ಜನಪರ ಚಟುವಟಿಕೆಗಳು ನಡೆಯಲಿ,ತಮ್ಮ ಊರು - ಜಿಲ್ಲೆಗಳ ಉದ್ದಾರಕ್ಕಾಗಿ ನಾವುಗಳು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ಆದರೆ ಜನಪ್ರತಿನಿಧಿಗಳನ್ನು ತಾವುಗಳು ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಅಣ್ಣಾ, ಅಕ್ಕಾ .. ಅಂತಾ ಕಾಲು ಹಿಡಿಯುತ್ತಾರೆ. ನಂತರದ ದಿನಗಳಲ್ಲಿ ಎಲ್ಲವನೂ ಮರೆತು ಸರ್ಕಾರದ ಖಜಾನೆಯಲ್ಲಿ ಹಗಲು ದರೋಡೆ ಮಾಡುವುದನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ ಹಾಗೂ ನೋಡುತ್ತಲೂ ಇದ್ದೇವೆ. ಇಂತಹ ಭ್ರಷ್ಟಚಾರದ ಹಣೆಪಟ್ಟಿ ಹೊತ್ತು ಈಗಾಗಲೇ ಜೈಲು ಸೇರಿದವರಿಗೂ ಲೆಕ್ಕವಿಲ್ಲ. ಹಾಗೇ ಜೈಲು ಸೇರುವುದು ಕೂಡ ತಮಗೊಂದು ಹೆಮ್ಮೆಯ ಗರಿಯೆಂಬಂತೆ ಸಾಲು ಸಾಲು ಜನಪ್ರತಿನಿಧಿಗಳು ಜೈಲಿಗೆ ಹೋದರು, ಬಂದರು.. ಇನ್ನೂ ಬರದವರು ಕೂಡ ಇದ್ದಾರೆ.

ಈ ಎಲ್ಲಾ ವಿದ್ಯಮಾನಗಳಿಂದ ರಾಜ್ಯದ ಜನತೆ ರೋಸಿ ಹೋಗಿರುವುದಂತು ನಿಜ. ಪ್ರಜೆಗಳ ಹಿತ, ರಾಜ್ಯದ ಕ್ಷೇಮಕ್ಕಾಗಿ ನಡೆಯುವ ವಿಧಾನಸಭಾ ಕಲಾಪಗಳಲ್ಲಿ ತೀರಾ ಇತ್ತೀಚೆಗೆ (ಅಂದರೆ 07.02.2012ರಂದು) ಮಾನ್ಯ ಸಚಿವರಾದ ಲಕ್ಷ್ಮಣ ಸವದಿ ಯವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ವಿಷಯ ತಿಳಿದಿರಬಹುದು. ಇಂತಹ ವಿಚಾರಗಳ ಬಗ್ಗೆ ಮಾತನಾಡಲು ಸಹ ನಮಗೆ ಅಸಹ್ಯ ಹುಟ್ಟುತ್ತದೆ. ಅಂತಹುದರಲ್ಲಿ ಈ ಸಚಿವರು ನಿನ್ನೆ ಪತ್ರಿಕಾಗೋಷ್ಟಿ ಕೂಡ ಕರೆದು ನಾನು ಮಾಡಿದ್ದು ಅಂತಾ ಮಹಾ ತಪ್ಪೇನಲ್ಲ. ನಾವು ಉಡುಪಿಯಲ್ಲಿ ನಡೆದ ರೇವ್ ಪಾರ್ಟಿಯ ಕುರಿತು ಚರ್ಚಿಸುತ್ತಾ ಇದ್ದೆವು. ಹಾಗೇ ಹೀಗೆ ಅಂತಾ ಏನೇನೋ ಹೇಳುತ್ತಾ ರಾಜ್ಯದ ಜನತೆಗೆ ಕಣ್ಣಿಗೆ ನೇರವಾಗಿ ಮಣ್ಣೆರುಚುವ ಕೆಲಸ ಮಾಡಿದರು (ಎಲ್ಲಾ ಸಾಕ್ಷಿ ಪುರಾವೆಗಳು ಇದ್ದರೂ ಸಹ).

ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ತರುತ್ತಲೇ ಇರುವ ಇಂತಹ ಜನಪ್ರತಿನಿಧಿಗಳು ನಮಗೆ ಬೇಕಾ? ಇವರುಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....

Sunday, February 5, 2012

ವಿಷಯ - 01

ತಾಯಿ-ತಂದೆ ಇಬ್ಬರು, ಕಣ್ಣಿಗೆ ಕಾಣೋ ದೇವರು..!! ಎಂದು ಕೇಳಿದ್ದೇವೆ, ಹಾಡಿದ್ದೇವೆ. ಹಗಲು ರಾತ್ರಿಯೆನ್ನದೇ ಕಷ್ಟ ಪಟ್ಟು, ಮೊಳಕೆಯಲ್ಲಿರುವ ನಮ್ಮನ್ನು ಅತೀವ ಪ್ರೀತಿಯಿಂದ ಸಾಕಿ ಸಲಹಿ, ನಮ್ಮ ಬಾಲ್ಯದಲ್ಲಿ ನಮ್ಮನ್ನು ತಿದ್ದಿ ತೀಡಿ, ಬುದ್ದಿವಂತರಾಗಿ ಮಾಡಿದ ತಂದೆ ತಾಯಿಗಳು ನಾವು ಯೌವನಾವಸ್ಥೆಗೆ ತಲುಪಿದ ನಂತರದ ದಿನಗಳಲ್ಲಿ ಹಾಗೂ ಮನದನ್ನೆ ಮನೆಯಲ್ಲಿ ಬಂದಾದ ನಂತರದಲಿ ಹೆತ್ತವರು ಬೇಡವೆನಿಸಿ, ಅಥವಾ ಅವರನ್ನು ಸಾಕುವುದು ಹೊರೆಯೆನಿಸಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ನಮ್ಮ ತಂದೆ-ತಾಯಿಯರ ಪ್ರೀತಿ, ವಾತ್ಸಲ್ಯ, ಆದರತೆ ಹಾಗೂ ಆರ್ಶಿವಾದ ಇವೆಲ್ಲವೂ ಬರೀ ನಮ್ಮ ಬಾಲ್ಯದಲ್ಲಷ್ಟೇ ಸಾಕೇ? ಈ ರೀತಿ ತಂದೆ -ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವವರ ಬಗ್ಗೆ ನೀವು ಏನು ಹೇಳಲು ಇಷ್ಟಪಡ್ತೀರಿ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....

Friday, February 3, 2012

"ನೀವೇನಂತಿರಿ..??"

ಗೆಳೆಯರೇ, ಗೆಳತಿಯರೇ, ಹಿರಿಯರೇ, ಪ್ರಾಜ್ಞರೇ ನಿಮಗೆಲ್ಲಾ... ಶುಭದಿನ.


ಸಮಾಜದ ಆಗುಹೋಗುಗಳ ಜೊತೆಜೊತೆಗೆ ಅಗತ್ಯ ವಿಷಯಗಳ ಕುರಿತು ಸಮಾನ ಮನಸ್ಕರೊಂದಿಗೆ, ಪ್ರಾಜ್ಞರೊಂದಿಗೆ ಚರ್ಚಿಸಲು, ನಮ್ಮ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ಹಾಗೂ ನಮ್ಮ ಜ್ಞಾನಭಂಡಾರವನ್ನು ಇನ್ನು ವೃದ್ಧಿಗೊಳಿಸಲು ಇನ್ನು ಮುಂದೆ ಆಗಾಗ (ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ) ಒಂದು ವಿಷಯದ ಬಗ್ಗೆ ಪ್ರಸ್ತಾಪಿಸೋಣ ಅಂತಿದ್ದೇನೆ. ಅದಕ್ಕಾಗಿ ನಾನು "ನೀವೇನಂತಿರಿ..??" ಎಂಬ ಹೊಸ ಬ್ಲಾಗೊಂದನ್ನು ತೆರೆದಿದ್ದೇನೆ.
ನೀವುಗಳು ಮುಕ್ತವಾಗಿ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪ್ರತಿಕ್ರಿಯಿಸುವುದರ ಮೂಲಕ ಹಂಚಿಕೊಳ್ಳಲು ಕೋರಿದೆ ಹಾಗೂ ನನ್ನ ಈ ಪ್ರಯತ್ನಕ್ಕೆ ಸಹಕರಿಸಲು ಕೋರಿದೆ.